About us

ಭಾರತೀಯ ಸಾಂಸ್ಕೃತಿಕ ಪರಿಷತ್ತು – ಒಂದು ಸ್ಥೂಲ ಪರಿಕಲ್ಪನೆ

1. ಪೀಠಿಕೆ

ಅತ್ಯಂತ ಪ್ರಾಚೀನವಾದ ಮತ್ತು ಅನನ್ಯವಾದ ಸಾಮುದಾಯಿಕ ಹಿತತತ್ವಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪಡೆದಿರುವ ಒಂದು ಬೃಹತ್ ರಾಷ್ಟ್ರ ಭಾರತ. ಆದರೆ, ಕಾಲಘಟ್ಟದಲ್ಲಿ ನಡೆದ ದೀರ್ಘ ಪರಕೀಯ ಆಡಳಿತ, ಸ್ವಾತಂತ್ರ್ಯಾನಂತರದ ರಾಜಕೀಯ ವ್ಯವಸ್ಥೆ ಮತ್ತು ಪ್ರಸ್ತುತ ಜಾಗತೀಕರಣದ ಬಿರುಗಾಳಿ – ಇವುಗಳ ಪ್ರಭಾವದಿಂದಾಗಿ ನಮ್ಮ ದೇಶವು ತನ್ನ ಸಹಜ ಸಂಸ್ಕೃತಿಗೆ ಎರವಾಗಿ, ನೈತಿಕ ಅವನತಿಯ ಧಾಳಿಗೆ ತುತ್ತಾಗಿ ತತ್ತರಿಸಿದೆ.

ಭಾರತೀಯ ಪರಂಪರಾಗತ ಬದುಕಿನಲ್ಲಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಳಲ್ಲಿ ಸ್ಮರಣೀಯ ಪಾತ್ರ ವಹಿಸಿಕೊಂಡು ಬಂದಿರುವ ನಮ್ಮ ದೇಶದ ನಾನಾ ಮತ-ಪಂಥಗಳು, ಧಾರ್ಮಿಕ ಕೇಂದ್ರಗಳು ಮತ್ತು ಧರ್ಮಗುರುಗಳು ಈ ಸಾಂಸ್ಕೃತಿಕ ಸಂವರ್ಧನೆಯ ಮಹಾಮಣಿಹವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಜನಸಮುದಾಯದಲ್ಲಿ, ಅದರಲ್ಲೂ ಯುವಜನಾಂಗದಲ್ಲಿ, ಭಾರತೀಯ ಸಂಸ್ಕೃತಿಯ ಬಗೆಗೆ ಸ್ಪಷ್ಟವಾದ ಅರಿವು, ರಾಷ್ಟ್ರನಿಷ್ಠೆ, ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾಗಿದೆ. ಭಾರತೀಯರ ಬದುಕಿನಲ್ಲಿ ಸೌಹಾರ್ದ ಮತ್ತು ಸಾಮರಸ್ಯಗಳ ಹಿತಕರ ವಾತಾವರಣವನ್ನು ಉಂಟುಮಾಡಬೇಕಾಗಿದೆ.
 
ಈ ಹಿನ್ನೆಲೆಯಲ್ಲಿ, ಉನ್ನತ ಧ್ಯೇಯಾದರ್ಶಗಳೊಂದಿಗೆ ದೇಶದ ಸಾಂಸ್ಕೃತಿಕ ಘನತೆ-ಗೌರವಗಳ ರಕ್ಷಣೆಗಾಗಿ ಅರ್ಪಣಾಭಾವದಿಂದ ಯೋಜಿತ ಮತ್ತು ವಿಸ್ತೃತ ಸೇವಾಕಾರ್ಯಗಳನ್ನು ಕೈಗೊಳ್ಳುವಂತಹ ಒಂದು ರಾಷ್ಟ್ರೀಯ ಸಂಘಟನೆಯ ಅಗತ್ಯವಿದೆ. ಆ ದಿಸೆಯ ಚಿಂತನೆಯ ಫಲವೇ ’ಭಾರತೀಯ ಸಾಂಸ್ಕೃತಿಕ ಪರಿಷತ್ತು’.
 
2. ಧ್ಯೇಯೋದ್ದೇಶಗಳು
 
 1. ದೇಶದ ಜನಸಮುದಾಯದಲ್ಲಿ, ಮುಖ್ಯವಾಗಿ ಯುವಜನ ಸಮುದಾಯದಲ್ಲಿ ರಾಷ್ಟ್ರನಿಷ್ಠೆ ಮತ್ತು ಸಮಾಜಸೇವಾಪ್ರಜ್ಞೆಯನ್ನು ಮೂಡಿಸುವುದು.
 2. ದೇಶದ ಪ್ರಾಚೀನ ಸಂಸ್ಕೃತಿಯ ಮೌಲ್ಯಗಳನ್ನು ಜನಮನದಲ್ಲಿ ಪುನರ್ನೆಲೆಗೊಳಿಸಿ ಸಾರ್ವಜನಿಕ ಬದುಕಿಗೆ ನೆಮ್ಮದಿಯನ್ನೊದಗಿಸುವುದು.
 3. ಸಮುದಾಯ ಸೌಹಾರ್ದ ಮತ್ತು ಸಾಮರಸ್ಯ ಉಳಿಸಿ ಬೆಳೆಸಿಕೊಂಡು ಹೋಗುವಂತಹ ಯುವಜನರಲ್ಲಿ ಆಧ್ಯಾತ್ಮಿಕ ಶ್ರದ್ಧೆಯನ್ನು ಬೆಳೆಸುವುದು.
 4. ಜಾಗತಿಕ ಬದಲಾವಣೆಗಳು ಮತ್ತು ಸಮಕಾಲೀನ ಸಾಮಾಜಿಕ ಅಗತ್ಯಗಳನ್ನು ಗಮದಲ್ಲಿಟ್ಟುಕೊಂಡು ಜನಜೀವನಕ್ಕೆ ಮಾರ್ಗದರ್ಶನ ನೀಡುವುದು.
 5. ಗ್ರಾಮಮಟ್ಟದಿಂದ ಜಾಗತಿಕ ಮಟ್ಟದವರೆಗೆ ಮಾನವ ಸಂಬಂಧಗಳನ್ನು ನೀತಿ, ಶಾಂತಿ ಮತ್ತು ಸಮಾನತೆಯ ನೆಲೆಗಟ್ಟಿನ ಮೇಲೆ ಸುದೃಢಗೊಳಿಸುವುದು.
 6. ಜನರಲ್ಲಿ ಕಾಯಕಶ್ರದ್ಧೆಯ ಜೊತೆಗೆ ಈ ನೆಲದ ಸಾಹಿತ್ಯ-ಸಂಸ್ಕೃತಿಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಬೆಳೆಸುವುದು.
 7. ಭಾರತೀಯ ಸಂಸ್ಕೃತಿಗೆ ವಿಶ್ವಮಟ್ಟದಲ್ಲಿ ಘನತೆ ಗೌರವವನ್ನು ಹೆಚ್ಚಿಸುವುದು.
 
3. ಉದ್ದೇಶಿತ ಕಾರ್ಯಚಟುವಟಿಕೆಗಳು
 
 1. ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದವರೆಗೆ, ಕ್ರಮೇಣ ಜಾಗತಿಕಮಟ್ಟದವರೆಗೆ ಮಾನವ ಹಿತಚಿಂತನೆಯ ವಿಚಾರಗೋಷ್ಠಿಗಳನ್ನು ನಡೆಸುವುದು.
 2. ಯುವಸಮುದಾಯದಲ್ಲಿ ಶ್ರೇಷ್ಠ ಜೀವನಮೌಲ್ಯಗಳು ಮತ್ತು ಆಧ್ಯಾತ್ಮಿಕ ಶ್ರದ್ಧೆಗಳನ್ನು ಮೈಗೂಡಿಸಿಕೊಳ್ಳುವಂತಹ ಶಿಬಿರಗಳನ್ನು ನಡೆಸುವುದು.
 3. ವಿಶ್ವದ ನಾನಾ ಭಾಗಗಳಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯ ದರ್ಶನಕ್ಕಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
 4. ಭಾರತೀಯ ಸಂಸ್ಕೃತಿ ಪ್ರಸಾರದಲ್ಲಿ  ಕ್ರಿಯಾಶೀಲವಾಗಿರುವ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಸಹಯೋಗದ ಕಾರ್ಯಕ್ರಮಗಳನ್ನು ನಡೆಸುವುದು.
 5. ಮೌಲ್ಯಾಧಾರಿತ ಗ್ರಂಥಗಳು ಮತ್ತು ನಿಯತಕಾಲಿಕಗಳನ್ನು ಪ್ರಕಟಿಸುವುದು, ಆಧುನಿಕ ತಂತ್ರಜ್ಞಾನದ ಧ್ವನಿಸುರುಳಿ, ಸಿ.ಡಿ., ವರ್ಣ ಫಲಕಗಳು, ಸಾಕ್ಷ್ಯ ಹಾಗೂ ಕಥಾ ಚಲನಚಿತ್ರಗಳು, ಇಂಟರ್ ನೆಟ್, ಆಕಾಶವಾಣಿ, ದೂರದರ್ಶನ – ಇತ್ಯಾದಿ ಮಾಧ್ಯಮಗಳ ಮೂಲಕ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುವುದು.
 6. ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ – ಹೀಗೆ ವಿವಿಧ ಹಂತಗಳಲ್ಲಿ ನಿಯತಕಾಲಿಕ, ಸಾಂಸ್ಕೃತಿಕ ಸಮಾವೇಶ, ವಿಚಾರಸಂಕಿರಣ, ಸಮ್ಮೇಳನ ಹಾಗೂ ಕಾರ್ಯಾಗಾರಗಳನ್ನು ನಡೆಸುವುದು.
 7. ಯುವಜನಾಂಗದಲ್ಲಿ ಆತ್ಮವಿಶ್ವಾಸ, ಜೀವನಶ್ರದ್ಧೆ, ಶೀಲ-ಚಾರಿತ್ರ್ಯ, ಸಮಷ್ಟಿ ಪ್ರಜ್ಞೆ – ಇತ್ಯಾದಿ ಮೌಲ್ಯಗಳನ್ನು ಮೈಗೂಡಿಸಲು ನೆರವಾಗುವಂತಹ ಪೂರಕ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.